“ಶಿಕ್ಷಣ ಎಂಬುದು ಅದ್ಭುತ ಶಕ್ತಿ , ವಿದ್ಯಾರ್ಥಿಗಳ ಪ್ರತಿಭೆ ತೋರ್ಪಡಿಸುವಲ್ಲಿ ಶಿಕ್ಷಣ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ದುಸ್ಸಾಹಸಕ್ಕೆ ಕೈ ಹಾಕದೆ ಏಕಾಗ್ರತೆ ಸಾಧಿಸುವುದು ಬಹಳ ಮುಖ್ಯ” ಎಂದು ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿಧರ ಗೌಡ ಅವರು ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕಾಗಿ ಆಯೋಜಿಸಲಾದ “ಉತ್ಕರ್ಷ – 2019” ರ ಉಧ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಇದ್ದದ್ದೇ. ಅದನ್ನು ಸಮಚಿತ್ತದಿಂದ ಸ್ವೀಕರಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಪ್ರೊ ಬಾಲಚಂದ್ರ ಗೌಡ ಅವರು ಮಾತನಾಡಿ ಭಾರತದ ಪ್ರತಿಯೊಂದು ಮಗು ವಿದ್ಯಾವಂತ, ಪ್ರತಿಭಾವಂತನಾಗಬೇಕು . ಅವಕಾಶದ ಸದುಪಯೋಗ ಪಡಿಸಬೇಕು ಎಂದರು. ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ತರಗತಿ ಕೊನೆಯ ಶಿಕ್ಷಣದೊಂದಿಗೆ ಹೊರಗಿನ ವಿಷಯಗಳನ್ನು ಅರಿತುಕೊಳ್ಳುವುದು ಶಿಕ್ಷಣದ ಪ್ರಮುಖ ಭಾಗ ಎಂದರು. ವಿದ್ಯಾರ್ಥಿಗಳಿಗೆ ಸ್ನೇಹಿತರ ಬಳಗ , ಪರಸ್ಪರ ಸಮಾಜದಲ್ಲಿ ಪೂರಕವಾಗಿ ನಡೆದುಕೊಳ್ಳುವುದರಿಂದ ತಮ್ಮನ್ನು ತಾವು ಸಮಾಜದಲ್ಲಿ ವಿಸ್ತರಿಸಿಕೊಳ್ಳಲು ಆ ಮೂಲಕ ಭವಿಷ್ಯಕ್ಕೆ ಅವಕಾಶ ಒದಗಿಸುವಲ್ಲಿ ಶಿಕ್ಷಣ ಪ್ರಧಾನ ಪಾತ್ರ ವಹಿಸುತ್ತದೆ ಎಂದರು. ವೇದಿಕೆಯಲ್ಲಿ “ಉತ್ಕರ್ಷ-2019” ಸಂಯೋಜಕರಾದ ಶ್ರೀ ದಾಮೋದರ್ ಅವರು ಉಪಸ್ಥಿತರಿದ್ದರು. ಸಂಯೋಜಕಿಯರಾದ ಉಪನ್ಯಾಸಕಿ ಶ್ರೀಮತಿ ರತ್ನಾವತಿ ಸ್ವಾಗತಿಸಿ, ಶ್ರೀಮತಿ ರೇಷ್ಮಾ ವಂದಿಸಿದರು.ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಲಕ್ಷ್ಮಣ್ ಏನೆಕಲ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಜವರೇ ಗೌಡ ಅವರು ಭಾಗವಹಿಸಿದ್ದರು. ಸುಮಾರು 10 ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು ಹನ್ನೊಂದು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಮತ್ತು ಮುಂದಿನ ಹಂತದ ವಿದ್ಯಾಭ್ಯಾಸದ ಆಯ್ಕೆ ಹೇಗಿರಬೇಕು ಎಂದು ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.