ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ.
ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಮಾನವಿಕ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕೆಸರು ಗದ್ದೆ ಕೂಟ ‘ ಸಿಸನ್ 2 ಕ್ರೀಡಾ ಕೂಟವು ಜುಲೈ 24ರಂದು ಬೂಡು ಶ್ರೀ ಭಗವತಿ ಗದ್ದೆ,ಕೇರ್ಪಳ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಪನ್ನೆ ಬೀಡು ಭಗವತಿ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಅವರು ಮಾತನಾಡಿ ನಮ್ಮ ಕೃಷಿ ಪ್ರಧಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು ಹೋದಾಗ ನಮ್ಮ ಶ್ರೀಮಂತ ರೈತ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ನಮ್ಮ ಮೂಲ ಸಂಸ್ಕೃತಿಯನ್ನು ನಾವೆಲ್ಲರೂ ಬೆಳೆಸಿದಾಗ ಅದರ ಪರಿಚಯ ನಮಗೆ ಆಗಲು ಸಾಧ್ಯ ಎಂದರು.ಎ ಓ ಎಲ್ ಇ (ರಿ )ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿ ಕೃಷಿ ಬದುಕಿನ ಜೊತೆಗೆ ನಾವು ಬೆರೆಯಬೇಕು, ಮಣ್ಣಿನ ಸ್ಪರ್ಶ ಹೊಸತನದ ಸ್ಫೂರ್ತಿ ನೀಡುವುದು. ಈ ಕ್ರೀಡಾ ಕೂಟ ವಿದ್ಯಾರ್ಥಿಗಳಿಗೆ ಹೊಸ ಅನುಭವ ಕಟ್ಟಿ ಕೊಡಲಿ,ಬದುಕಿನ ಹಾದಿಯಲ್ಲಿ ಈ ಅನುಭವ ಶಾಶ್ವತವಾಗಿರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು,ಭಗವತಿ ಯುವ ಸೇವಾ ಸಂಘ ಕೇರ್ಪಳ ಇದರ ಅಧ್ಯಕ್ಷರಾದ ಸುನಿಲ್ ಕುಮಾರ್ ಕೇರ್ಪಳ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿನಿಯರಾದ ಶರಣ್ಯ ಮತ್ತು ಬಳಗದವರು ರೈತ ಗೀತೆ ಹಾಡಿದರು.,ಮಾನವಿಕ ಸಂಘದ ಸಂಚಾಲಕಿ ರೇಷ್ಮಾ ಎಂ ಎಂ ಸ್ವಾಗತಿಸಿ,,ವಾಣಿಜ್ಯ ಸಂಘದ ಸಂಚಾಲಕಿ ಹರ್ಷಿತ ಎ ಬಿ, ವಂದಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಅರ್ಥಶಾಸ್ತ್ರ ಉಪನ್ಯಾಸಕ ವಿನಯ್ ನಿಡ್ಯಮಲೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಸ್ಥೆಯ ಕ್ರೀಡಾ ಕೋಚ್ ನಾಗರಾಜ್ ಭಟ್ಕಳ, ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿ ಸದಸ್ಯರು ತೀರ್ಪುಗಾರರಾಗಿ ಸಹಕರಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಉದ್ಯೋಗಿ ಶಶಿಕಾಂತ್ ಮಿತ್ತೂರು ವೀಕ್ಷಕ ವಿವರಣೆ ನೀಡಿದರು.ಶ್ರೇಯ ಎಂ ಜಿ ಮತ್ತು ಬಳಗದವರು ನೃತ್ಯ ಪ್ರಸ್ತುತ ಪಡಿಸಿದರು.ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ 100 ಮೀ ಓಟ, ಕಂಬಳ ಓಟ,ಬುಗರಿ ಓಟ,ವಾಲಿಬಾಲ್,ರಿಲೇ,ಹಗ್ಗಜಗ್ಗಾಟ ಮೊದಲಾದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಆಡಿ ನಲಿದು ಅಪೂರ್ವ ಕ್ಷಣಗಳನ್ನು ಸಂಭ್ರಮಿಸಿದರು. ಕಾಲೇಜಿನ ಬೋಧಕ -ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.




